ತಾಲೂಕಿನ ಸಾಲಗಾಮೆ ಹೋಬಳಿ ವೀರಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ
- Mar 13, 2018
- 1 min read

ತಾಲೂಕಿನ ಸಾಲಗಾಮೆ ಹೋಬಳಿ ವೀರಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಮಹಿಳೆಯರು ಶನಿವಾರ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮಹಿಳೆಯರು ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ವೀರಾಪುರ ಗ್ರಾಮದಲ್ಲಿ ಸುಮಾರು 250 ಕುಟುಂಬಗಳು ವಾಸಿಸುತ್ತಿದ್ದು ಎಲ್ಲರೂ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಗ್ರಾಮದ 4 ಕುಟುಂಬಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಮೂಲಕ ಗ್ರಾಮದ ನೆಮ್ಮದಿಯನ್ನು ಹಾಳು ಮಾಡುತ್ತಿವೆ. ಯುವಕರಿಂದ ಹಿಡಿದು ವೃದ್ಧರವರೆಗೂ ಮದ್ಯಪಾನ ಚಟಕ್ಕೆ ಬಲಿಯಾಗಿದ್ದಾರೆ. ದುಡಿದ ಹಣವನ್ನೆಲ್ಲ ಕುಡಿತಕ್ಕೆ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕುಡಿದು ಬಂದು ಹೆಂಡತಿ ಮಕ್ಕಳಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದಾರೆ. ಇದರಿಂದ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಅಕ್ರಮ ಮದ್ಯ ಮಾರಾಟ ತಡೆಯುವಂತೆ ಗ್ರಾಮದ ಮಹಿಳೆಯರೆಲ್ಲರೂ ಸೇರಿ ಅಬಕಾರಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಇತ್ತೀಚೆಗೆ ಅಬಕಾರಿ ಇಲಾಖೆ ಬಳಿ ಪ್ರತಿಭಟನೆ ನಡೆಸಿದ್ದರಿಂದ ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಮಹಿಳೆಯೊಬ್ಬರನ್ನು ಮದ್ಯ ಸಮೇತ ಬಂಧಿಸಿದರು. ಆದರೆ,ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟು ಕಳುಹಿಸಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳ ಕುಮ್ಮುಕ್ಕಿನಿಂದಲೇ ಗ್ರಾಮದಲ್ಲಿ ಮದ್ಯ ಮಾರಾಟ ಹೆಚ್ಚಾಗಿದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.




Comments