top of page

ಪೊಲೀಸರಲ್ಲೂ ಪರಿಸರ ಹೃದಯವಿದೆ: ನಂದಿನಿ

  • Mar 31, 2018
  • 2 min read

ಪೊಲೀಸರಲ್ಲೂ ಪರಿಸರ ಹೃದಯವಿದೆ: ನಂದಿನಿ

ಹಾಸನ: ಪೊಲೀಸರ ಕಾರ್ಯ ಸಮಾಜದ ವಿದ್ರೋಹಿ ಶಕ್ತಿಗಳ ಮತ್ತು ಚಟುವಟಿಕೆಗಳ ಪ್ರತಿಬಂಧನೆಗಳ ನಡುವೆ ಇರುವ ಕಾರಣ ಕಠಿಣ ಹೃದಯದವರಾಗಿ ಕಾಣುತ್ತಾರೆ. ಆದರೆ ಆಂತರ್ಯದಲ್ಲಿ ಪ್ರೀತಿ, ಕರುಣೆ ಎಲ್ಲವೂ ಇರುತ್ತದೆ. ಪರಿಸರಮುಖಿ ಕೆಲಸದಲ್ಲಿ ಪೊಲೀಸರ ಹೃದಯಗಳೂ ಜೊತೆ ಸೇರುತ್ತವೆ ಎಂದು ಹಾಸನ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲೆ ನಂದಿನಿ ಹೇಳಿದರು. ಅವರು ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆ ಮತ್ತು ಹಾಸನ ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿ ಗಾಡೇನಹಳ್ಳಿಯಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಪೊಲೀಸ್ ಶಿಶಿಕ್ಷುಗಳಿಗಾಗಿ ಆಯೋಜಿಸಿದ್ದ ವೈಜ್ಞಾನಿಕ ಮನೋವೃತ್ತಿ ಮತ್ತು ಜಲಸಾಕ್ಷರತಾ ಸಂವಹನ-ಸಂವಾದ ಉದ್ಘಾಟಿಸಿ ಮಾತನಾಡುತ್ತಿದ್ದರು. ಪೊಲೀಸರು ಕೂಡ ಸ್ವಸ್ಥ ಸಮಾಜ ಇರಬೇಕೆಂದು ಬಯಸುವವರು ಹಾಗೂ ಅದಕ್ಕಾಗಿ ದುಡಿಯುತ್ತಿರುವವರು. ಅವರಲ್ಲೂ ಸಾಮಾಜಿಕ ಪ್ರಜ್ಞೆ, ವೈಜ್ಞಾನಿಕ ಮನೋವೃತ್ತಿ, ಪರಿಸರ ಕಾಳಜಿ ಹಾಗೂ ಜಲಸಾಕ್ಷರತೆಯ ಕುರಿತು ಆಳವಾದ ಅರಿವು ಇರಬೇಕಿರುವುದು ಅತ್ಯಗತ್ಯವಾಗಿದೆ. ಹಾಗಾಗಿ ಪೊಲೀಸ್ ಸಿಬ್ಬಂದಿಗಳಿಗೂ ಪರಿಸರ ಹಾಗೂ ನೆಲ ಜಲದ ಕುರಿತು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ನಮಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು, ಇಲ್ಲಿಂದ ತರಬೇತಿ ಪಡೆದು ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯನಿರ‍್ವಹಿಸುವ ಪೊಲೀಸರು ತಮ್ಮ ತಮ್ಮ ಸ್ಥಳಗಳಲ್ಲಿ ಪರಿಸರ ಕಾಳಜಿ ಹಾಗೂ ನೀರಿನ ಸಂರಕ್ಷಣೆ ಕುರಿತು ಜನರೊಟ್ಟಿಗೆ ಸೇರಿ ಸಮಾಜ ಸೇವೆ ಮಾಡಬೇಕು ಎಂದರು. ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕಿ ಮಮತಾಭಟ್, ಪ್ರತಿಹಳ್ಳಿಗಳಲ್ಲೂ ಪೊಲೀಸರು ಸಮಾಜ ಕಂಟಕರ ವಿರುದ್ದ ಹೋರಾಡಿ ಜನರಕ್ಷಕರಾಗಿ ದುಡಿಯುತ್ತಿದ್ದಾರೆ. ಇದರ ಜೊತೆಗೆ ಪರಿಸರ ಮತ್ತು ಜಲಸಂರಕ್ಷಣೆ ಕುರಿತು ಊರಿನ ಜನತೆಗೆ ಮಾರ್ಗದರ್ಶನ ಮಾಡುವ ಚಟುವಟಿಕೆಯಲ್ಲೂ ಪಾಲ್ಗೊಳ್ಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಈ ಮೂಲಕ ಪೊಲೀಸರ ಮೇಲೆ ಜನತೆಗೆ ಉತ್ತಮ ಅಭಿಪ್ರಾಯ ಇನ್ನೂ ಹೆಚ್ಚಾಗಲಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಮಮತಶಿವು ಮಾತನಾಡಿ ಕಳೆದ 28 ವರ್ಷಗಳಿಂದಲೂ ಬಿಜಿವಿಎಸ್ ರಾಜ್ಯಾದ್ಯಂತ ಜನರಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಲು ವಿವಿಧ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಭಾರತ ಈಗಿನ ಸ್ಥಿತಿಯಲ್ಲಿ ಕುಡಿಯುವ ನೀರಿನ ಅಭಾವ ಎದುರಿಸುತ್ತಿದೆ. ಇದಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕಿದೆ ಈ ನಿಟ್ಟಿನಲ್ಲಿ ನೆಲ-ಜಲ ಸಂರಕ್ಷಣೆಯು ಒಂದು ಆಂದೋಲನದ ರೂಪದಲ್ಲಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಬಿಜಿವಿಎಸ್ ಜಲಾಂದೋಲನ ನಡೆಸಲು ಜನರನ್ನು ಒಳಗೊಳ್ಳುವಿಕೆಯಲ್ಲಿ ಪಾಲ್ಗೊಳ್ಳಲು ಜನರೊಂದಿಗೆ ಸಂವಾದಿಸುತ್ತಿದೆ. ಇದರಲ್ಲಿ ಪೊಲೀಸ್ ಸಿಬ್ಬಂದಿಗಳೂ ಕೂಡ ಭಾಗಿಯಾಗಬೇಕಿದೆ ಎಂದರು. ’ನೀರು ಒಂದು ಸಾಂಸ್ಕೃತಿಕ ಸಂವಹನ’ವಿಷಯ ಕುರಿತು ತ್ರಿಜಗ್ ಥಿಯರಿ ಮತ್ತು ಪಿಪಿಟಿ ವಿವರಣೆ ನೀಡಿದ ವಿಜ್ಞಾನ ಲೇಖಕ ಕೆ.ಎಸ್.ರವಿಕುಮಾರ್ ಮಾನವ ಊಟವಿಲ್ಲದೆ ತಿಂಗಳಗಟ್ಟಲೆ ಬದುಕಬಲ್ಲ. ಆದರೆ ನೀರಿಲ್ಲದೆ ಒಂದು ವಾರವೂ ಬದುಕಿರಲಾರ. ದೇಹವನ್ನು ಚೈತನ್ಯವಾಗಿಡುವುದೇ ನೀರು. ನೀರು ನಿಸರ್ಗದಲ್ಲಿ ಸಿಗುವ ಅಮೂಲ್ಯ ಸಂಪನ್ಮೂಲ. ನೀರಿಗಾಗಿ ದೇಶ ದೇಶಗಳ ನಡುವಿನ ಘರ್ಷಣೆ ಜಾಗತಿಕ ಯುದ್ಧಕ್ಕೆ ನಾಂದಿ ಹಾಡಿತು. ನಂತರದಲ್ಲಿ ನದಿ ನೀರಿನ ಹಂಚಿಕೆ ರಾಜ್ಯಗಳ ನಡುವೆ ವೈಮನಸ್ಯ ಮೂಡಿಸಿತು, ತದ ನಂತರ ಜಿಲ್ಲೆ ಜಿಲ್ಲೆಗಳ ನಡುವೆ ನೀರು ಹರಿಸುವಾಗ ರಾಜಕೀಯ ಯುದ್ಧ ಸೃಷ್ಟಿಸಿ ಈಗ ವಾರ್ಡ್-ವಾರ್ಡುಗಳ ನಡುವೆ ಕೌನ್ಸಿಲರ್ -ಕೌನ್ಸಿಲರ ನಡುವಿನ ವೈಮನಸ್ಯಕ್ಕೆ ಕಾರಣವಾಗಿದೆ ಎಂದು ಪಿಪಿಟಿ ಮೂಲಕ ವಿವರಿಸಿದರು. ಮನೆಗಳಲ್ಲಿ ನೀರನ್ನು ಮಿತವಾಗಿ ಬಳಸಲು ಅನುಕೂಲವಾಗುವ ಪರಿಕರಗಳನ್ನು ಬಳಸಬೇಕು, ಸ್ನಾನ ಮಾಡಲು ಚಿಕ್ಕ ಜಗ್, ಶೌಚಕ್ಕೆ ದೊಡ್ಡ ಜಗ್ ಬಳಸುವ ಪ್ರಾತ್ಯಕ್ಷಿಕೆ ತೋರಿಸಿದರು. ಕೇವಲ ಮೂರರಿಂದ ಐದು ಲೀಟರ್ ನೀರಿನಲ್ಲಿ ಕಾರನ್ನು ತೊಳೆಯುವ ಪ್ರಾತಕ್ಷಿಕೆಯನ್ನು ಕ್ಲೀನ್ಕಾರ್ ಗುಂಪಿನ ಚೇತನ್ ತೋರಿಸಿದರು. ಕಮೋಡ್ ಬಳಸುವಾಗ ವಾಷಿಂಗ್ ನೀರು, ಅಕ್ವಾಗಾರ‍್ಡಿನ ವ್ಯರ್ಥ ನೀರನ್ನ ಬಳಸಿ ನೀರನ್ನು ಸಮರ್ಪಕ ಹಾಗೂ ಮಿತಬಳಕೆ ಮಾಡುವ ವಿಧಾನ ತಿಳಿಸಿದರು. ಹಸಿರುಭೂಮಿಗಾಗಿ ವಿಷಯದ ಕುರಿತು ಪಿಪಿಟಿ ವಿವರಣೆ ನೀಡಿದ ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಅಹಮದ್ ಹಗರೆ ಜಲಸಾಕ್ಷರತೆ ಕುರಿತು ಶಿಬಿರಾರ್ಥಿಗಳಿಗೆ ಪರಿಚಯಿಸಿದರು. ಭೂಮಿಯ ಮೇಲೆ ಮಾನವನ ಬಳಿ ಇರುವುದು ಕೇವಲ 0.0001% ಮಾತ್ರ ಎಂದು ಲೆಕ್ಕಾಚಾರ ಮಾಡಿ ತೋರಿಸಿ ಈ ನೀರಿನಲ್ಲಿ ಸುಮಾರು 80% ಭಾಗ ಅಂತರ್ಜಲ ಮತ್ತು ಕೆರೆಕಟ್ಟೆಗಳ ಮೂಲಕ ಲಭ್ಯ ಎಂದು ಮನವರಿಕೆ ಮಾಡಿಸಿ ಅಂತರ್ಜಲಕ್ಕೂ ಕೆರೆ-ಕಟ್ಟೆಗಳಿಗೂ ಅಂತರ ಸಂಬಂಧದವಿದೆ. ಒಂದು ಬರಿದಾದರೆ ಇನ್ನೊಂದು ಅಸ್ತಿತ್ವ ಕಳೆದು ಕೊಳ್ಳಲಿದೆ ಎಂದು ತಿಳಿಸಿದರು. ಹಾಸನ ಜಿಲ್ಲೆಯಾದ್ಯಂತ ಹಸಿರುಭೂಮಿ ಪ್ರತಿಷ್ಠಾನವು ನಾಗರೀಕರು, ಸಂಘಟನೆಗಳು, ವಿಚಾರವಂತರನ್ನು ಒಟ್ಟಗೂಡಿಸಿ ಕೆರ-ಕಲ್ಯಾಣಿಗಳ ಪಪುನಶ್ಚೇಚೇತನ ಮಾಡಿದ ಸಾಕ್ಷ್ಯಚಿತ್ರ ತೋರಿಸಿ ಮಾಹಿತಿ ಒದಗಿಸಿದ ಅವರು ಹಸಿರುಭೂಮಿ ಪ್ರತಿಷ್ಠಾನದ ಕೆಸ ಜನಾಂದೋಲನದ ನೈಜ ಮಾದರಿ ಎಂದು ಶ್ಲಾಘಿಸಿದರು. ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಕುರಿತು ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜು ವಿವರ ನೀಡಿದರು. ಸಂವಾದ-ಸಂವಹನ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 400 ಪೊಲೀಸ್ ಶಿಶಿಕ್ಷುಗಳು ನೆಲ-ಜಲ ಸಂರಕ್ಷಣೆ ಮತ್ತು ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಪ್ರಮಾಣವಚನ ಸ್ವೀಕರಿಸಿದರು. ಸಂಚಾಲಕಿ ಮಮತ ಎಲ್ಲರಿಗೂ ವಂದಿಸಿದರು.






Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page