ಬೇಲೂರಿನ ಚನ್ನಕೇಶವಸ್ವಾಮಿಯ ‘ಬ್ರಹ್ಮ ರಥೋತ್ಸವ’ ಕಿಕ್ಕಿರಿದ ಜನಸಾಗರ
- Mar 30, 2018
- 1 min read
#ಬೇಲೂರು: ನಾಡಿನ ಪ್ರಮುಖ ರಥೋತ್ಸವಗಳಲ್ಲಿ ಒಂದಾದ ನಮ್ಮ ಹಾಸನ ಜಿಲ್ಲ ಬೇಲೂರಿನ ಚನ್ನಕೇಶವಸ್ವಾಮಿಯ ‘ಬ್ರಹ್ಮ ರಥೋತ್ಸವ’ ಕಿಕ್ಕಿರಿದ ಜನಸಾಗರದ ನಡುವೆ ಗುರುವಾರ ವಿಜೃಂಭಣೆಯಿಂದ ಜರುಗಿತು.
‘ಗಳಿಗೆತೇರು’ ಎಂದೇ ಜನಪ್ರಿಯವಾಗಿರುವ ಇಂದಿನ ರಥೋತ್ಸವವು ಮುಹೂರ್ತದಂತೆ ಬೆಳಿಗ್ಗೆ 11.15ರಿಂದ 11.50 ರೊಳಗಿನ ಮಿಥುನ ಲಗ್ನದಲ್ಲಿ ನಡೆಯಿತು.
ರಥೋತ್ಸವ ಎರಡು ದಿನ ನಡೆಯಲಿದ್ದು ಮೊದಲ ದಿನವಾದ ಗುರುವಾರ ರಥವನ್ನು ದೇಗುಲದ ಪೂರ್ವ ದಿಕ್ಕಿನ ಬೀದಿಯ ಈಶಾನ್ಯ ಮೂಲೆಯಿಂದ ಆಗ್ನೇಯ ದಿಕ್ಕಿನವರೆಗೆ ಎಳೆದು ನಿಲ್ಲಿಸಲಾಯಿತು.
ಬೇರೆಡೆ ರಥದ ಮೇಲೆ ದೇವರ ಉತ್ಸವ ಮೂರ್ತಿಗಳನ್ನು ಪೀಠದ ಮೇಲೆ ಕೂರಿಸಿ ರಥವನ್ನು ಎಳೆದರೆ, ಬೇಲೂರಿನಲ್ಲಿ ಚನ್ನಕೇಶವಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥದ ಮೇಲೆ ಕೂರಿಸದೇ ಉಯ್ಯಾಲೆಯಂತೆ ಕಟ್ಟಿ ರಥವನ್ನು ಎಳೆಯಲಾಗುತ್ತದೆ.
‘ರಥದಲ್ಲಿ ಉಯ್ಯಾಲೆಯ ಮೇಲಿರುವ ಕೇಶವನನ್ನು ನೋಡಿದರೆ ಪುನರ್ಜನ್ಮ ಇಲ್ಲ’ ಎಂಬುದು ಭಕ್ತರ ನಂಬಿಕೆ. (ಡೋಲಾಯಮಾನಂ ಗೋವಿಂದಂ ಮಂಚಸ್ಥಂ ಮಧುಸೂದನಂ ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ ಎಂಬ ಶ್ಲೋಕದಂತೆ)
ಭಾನುವಾರ ನಾಡಿನ ರಥೋತ್ಸವ ನಡೆಯಲಿದ್ದು ರಥವನ್ನು ಉಳಿದ ಮೂರು ದಿಕ್ಕಿನ ಬೀದಿಗಳಲ್ಲಿ ಎಳೆದು ಸ್ವಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ.
ರಥೋತ್ಸವಕ್ಕೂ ಮುನ್ನ ಗರುಡ ಪಕ್ಷಿಯೊಂದು ದೇವಾಲಯ ಹಾಗೂ ರಥದ ಪ್ರದಕ್ಷಿಣೆ ಮಾಡುತ್ತದೆ ಎಂಬುದು ಜನರ ನಂಬಿಕೆ. ಅದರಂತೆ ಇಂದೂ ಗರುಡ ಪಕ್ಷಿಯೊಂದು ಪ್ರದಕ್ಷಿಣೆ ಹಾಕಿತು.
ರಥ ಏರಿದ ದೇವೇಗೌಡರು: ಸಂಸದ ಎಚ್.ಡಿ.ದೇವೇಗೌಡರು ರಥದ ಮೇಲೇರಿ ಕೇಶವನಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಬಳಿಕ ಚನ್ನಕೇಶವ ಮತ್ತು ಸೌಮ್ಯನಾಯಕಿ ಅಮ್ಮನವರ ದರ್ಶನ ಪಡೆದ ಅವರು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಶಾಸಕ ಎಚ್.ಡಿ.ರೇವಣ್ಣ ಇದ್ದರು.
ಭಾವೈಕ್ಯದ ಸಂಕೇತ: ಚನ್ನಕೇಶವಸ್ವಾಮಿಯ ರಥೋತ್ಸವವು ಭಾವೈಕ್ಯದ ಸಂಕೇತವೂ ಆಗಿದೆ. ರಥ ಎಳೆಯುವ ಮುನ್ನ ಸಮೀಪದ ದೊಡ್ಡಮೇದೂರು ಗ್ರಾಮದ ಮುಸ್ಲಿಂ ಖಾಜಿ #ಸೈಯ್ಯದ್_ಸಜ್ಜಾದ್‌ಭಾಗಿಯಾಗುದ್ದರು.





Comments