ಹೆಚ್.ಪಿ.ಸಿ.ಎಲ್ ಕಂಪೆನಿಯವರು ಪುನಶ್ಚೇತನಗೊಳಿಸಿದ ಗವೇನಹಳ್ಳಿ ಕೆರೆಯ ಲೋಕಾರ್ಪಣೆ
- Mar 29, 2018
- 1 min read
‘ಪ್ರತಿಯೊಬ್ಬ ಪ್ರಜೆಯೂ ನೀರಿನ ಬಳಕೆಯ ಜೊತೆಗೆ ಭೂಮಿಗೆ ನೀರನ್ನು ಇಂಗಿಸುವ ಕೆಲಸ ಮಾಡಬೇಕಿದೆ. ಜಲಸಾಕ್ಷರರಾಗುವುದು ಇಂದಿನ ಅಗತ್ಯವಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಜಾನಕಿ ಹೇಳಿದ್ದಾರೆ. ಹಸಿರುಭೂಮಿ ಪ್ರತಿಷ್ಠಾನದ ಮನವಿಯ ಮೇರೆಗೆ ಹೆಚ್.ಪಿ.ಸಿ.ಎಲ್ ಕಂಪೆನಿಯವರು ಪುನಶ್ಚೇತನಗೊಳಿಸಿದ ಗವೇನಹಳ್ಳಿ ಕೆರೆಯ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಾಮಾಜಿಕ ಹೊಣೆಗಾರಿಕೆಯ ನಿಧಿಯನ್ನು ಬಳಸಿ, ಕೆರೆಯ ಪುನಶ್ಚೇತನ ಮಾಡುವ ಮೂಲಕ ಹೆಚ್.ಪಿ.ಸಿ.ಎಲ್. ಕಂಪೆನಿಯವರು ಮಾದರಿ ಆಗಿದ್ದಾರೆ. ಬೇರೆಯವರ ಜವಾಬ್ದಾರಿಯ ಬಗ್ಗೆ ಮಾತನಾಡುವ ಎಲ್ಲರೂ ತಮ್ಮ ಜವಾಬ್ದಾರಿಯ ಬಗ್ಗೆ ಕೂಡ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕೆಂದು ಸಲಹೆ ನೀಡಿದರು. ಟೇಪು ಕತ್ತರಿಸುವ ಮೂಲಕ ಕೆರೆಯ ದ್ವಾರವನ್ನು ಉದ್ಘಾಟಿಸಿದ ಉಪವಿಭಾಗಾಧಿಕಾರಿ ಹಾಗು ಹಸಿರುಭೂಮಿ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ|| ಹೆಚ್.ಎಲ್.ನಾಗರಾಜ್ ಅವರು ಮಾತನಾಡಿ, ತಮ್ಮ ಒಂದೇ ಒಂದು ಕೋರಿಕೆಯನ್ನು ಮನ್ನಿಸಿ ಹೆಚ್.ಪಿ.ಸಿ.ಎಲ್. ಕಂಪೆನಿಯವರು ಗವೇನಹಳ್ಳಿ ಕೆರೆಯ ಪುನಶ್ಚೇತನಕ್ಕೆ ಮುಂದಾಗಿದ್ದು, ತಮಗೆ ಬಹಳ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರಲ್ಲದೆ, ಕೆರೆಯನ್ನು ಕಟ್ಟಿಸುವುದು ಬಹಳ ಪವಿತ್ರವಾದ ಕೆಲಸವೆಂದು ಹಿಂದಿನ ಹಿರಿಯರು ಹೇಳಿದ್ದಾರೆ. ಹಾಸನದಂತಹ ಮಲೆನಾಡಿನ ಸೆರಗಿನಲ್ಲಿರುವ ಊರಿಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು ಒಳ್ಳೆಯ ಲಕ್ಷಣವಲ್ಲ. ಹೆಚ್.ಪಿ.ಸಿ.ಎಲ್ ಕಂಪೆನಿಯವರಂತೆ ಹಾಸನದ ಉದ್ಯಮಿಗಳು ಮುಂದೆ ಬಂದು ನಗರದ ಸುತ್ತ ಮುತ್ತ ಇರುವ ಕೆರೆಗಳ ಪುನಶ್ಚೇತನ ಕಾರ್ಯ ಕೈಗತ್ತಿಕೊಳ್ಳಬೇಕೆಂದು ವಿನಂತಿ ಮಾಡಿದರು. ಹಸಿರುಭೂಮಿ ಪ್ರತಿಷ್ಠಾನ ಆರಂಭಿಸಿರುವ ಕಲ್ಯಾಣಿಗಳ ಪುನಶ್ಚೇತನ ಕಾರ್ಯಕ್ಕೆ ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನಾಡಿನ ಶ್ರೇಷ್ಠ ಸಂಗೀತಗಾರರಾದ ಆರ್.ಕೆ ಪದ್ಮನಾಭ ಅವರು ಅರಕಲಗೂಡು ತಾಲ್ಲೂಕಿನ ಜಲಸಂರಕ್ಷಣ `ಆಂದೋಲನ' ಕೈಗತ್ತಿಕೊಳ್ಳಲು ಮುಂದೆ ಬಂದಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಚ.ನ.ಅಶೋಕ್ ನೇತೃತ್ವದಲ್ಲಿ ಕಲ್ಯಾಣಿಗಳ ಪುನಶ್ಚೇತನ ಕಾರ್ಯ ವ್ಯಾಪಕವಾಗಿ ನಡೆಯಲಿದೆ ಎಂದು ತಿಳಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ.ಶಿವಣ್ಣ, ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಜಿ.ಎಲ್ ಮುದ್ದೇಗೌಡ, ಪರಿಸರಪ್ರೇಮಿ ಚ.ನ.ಅಶೋಕ್ ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ. ವೆಂಕಟೇಶಮೂರ್ತಿ, ಹಿರಿಯ ನಾಗರಿಕ ವೇದಿಕೆ ಸಂಚಾಲಕ ಬಿ.ಕೆ.ಮಂಜುನಾಥ್ ಅವರು ಮಾತನಾಡಿ, ಹೆಚ್.ಪಿ.ಸಿಎಲ್. ಕಂಪೆನಿಯವರ ಕಾರ್ಯವನ್ನು ಶ್ಲಾಘಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ರೂಪಾ ಹಾಸನ ಅವರು ಮಾತನಾಡಿ, ರಾಜ್ಯದ 16 ಜಿಲ್ಲೆಗಳು ಶಾಶ್ವತ ಬರಪೀಡಿತ ಜಿಲ್ಲೆಗಳೆಂದು ಕೇಂದ್ರ ಸರ್ಕಾರ ಘೋಷಿಸಿದ್ದು, ಅದರಲ್ಲಿ ಹಾಸನ ಜಿಲ್ಲೆಯೂ ಸೇರಿರುವುದು ಆಘಾತಕಾರಿ ವಿಷಯ. ಬರಪೀಡಿತ ಜಿಲ್ಲೆಯೆಂಬಹಣೆಪಟ್ಟಿಯನ್ನು ತೊರೆದು ಹಾಕಲು ಜಿಲ್ಲೆಯಲ್ಲಿ ಜಲಸಂರಕ್ಷಣೆಗಾಗಿ ಜನಾಂದೋಲನ ನಡೆಯಬೇಕಿದೆ ಎಂದು ತಿಳಿಸಿದರು.






Comments